ಇದು ರೋಮನ್ ಚಕ್ರಾಧಿಪತ್ಯಕ್ಕೆ ಸೇರಿದ್ದು 13ನೆಯ ಶತಮಾನದವರೆಗೂ ಫ್ರೆಂಚರ ಪ್ರಭಾವಕ್ಕೆ ಒಳಗಾಗಿ ಅವರ ಸಂಸ್ಕೃತಿಯನ್ನೇ ಬೆಳೆಸಿಕೊಂಡಿತು. ಅನಂತರ ಡ್ಯೂಕರ ಸ್ವಯಂ ಆಡಳಿತಕ್ಕೆ ಒಳಗಾಗಿ 1789ರಲ್ಲಿ ಫ್ರೆಂಚರ ಆಡಳಿತಕ್ಕೆ ಒಳಪಟ್ಟಿತು. ಇದರ ಇತಿಹಾಸ ಪ್ರಸಿದ್ಧವಾದ ರಾಜಧಾನಿ ನ್ಯಾನ್ಸಿ. ಮ್ಯೂಸೆ ಮತ್ತು ಮೊಸಲ್ಲೆ ನದಿಗಳು ಹರಿಯುತ್ತವೆ. ಇದು ಸಾಮಾನ್ಯವಾಗಿ ಪರ್ವತ ಪ್ರದೇಶಗಳಿಂದ ಕೂಡಿದ್ದು ವ್ಯವಸಾಯಕ್ಕೆ ಮುಖ್ಯ ಕಸುಬಾಗಿದೆ. ಇಲ್ಲಿ ಸಿಗುವ ಕಬ್ಬಿಣದ ಅದಿರು ಯುರೋಪು ಖಂಡದಲ್ಲೇ ಹೆಚ್ಚಿನದಾಗಿದೆ. ಕಲ್ಲಿದ್ದಲಿನ ಗಣಿಗಳು ಹೇರಳವಾಗಿವೆ. ಹೀಗಾಗಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಹೆಚ್ಚು. ಹೆಚ್ಚಾಗಿ ಫ್ರೆಂಚ್ ಭಾಷೆಯನ್ನಾಡುವ ಜನರಿದ್ದಾರೆ. ಲೊಥರಿಂಜಿಯ ಸಾಮ್ರಾಜ್ಯದ ಅವಶೇಷವಾಗಿ ಲೊರೇನ್ ಪ್ರದೇಶ ಉಳಿದಿದೆ. 

ಈ ಪ್ರದೇಶಗಳ ಪ್ರಾಚೀನ ಇತಿಹಾಸ ಹೀಗಿದೆ
ಜ್ಯೂಲಿಯಸ್ ಸೀಸರನ ಕಾಲದಲ್ಲಿ ಫ್ರಾನ್ಸ್ ಅಥವಾ ಗಾಲ್ ಪ್ರಾಂತ್ಯದ ಭಾಗವಾಗಿದ್ದು ಮುಂದೆ ಚಾರ್ಲಮಾನನ ಚಕ್ರಾಧಿಪತ್ಯಕ್ಕೆ ಒಳಪಟ್ಟು ಅವನ ತರುವಾಯ ಉಂಟಾದ ವಿಭಜನೆಗಳ ಪರಿಣಾಮವಾಗಿ ಜರ್ಮನಿಯ ಅರಸ ಲೂಯಿ ವಶಕ್ಕೆ ಒಳಗಾಯಿತು. 1648ರಲ್ಲಿ ವೆಸ್ಟ್ ಫ್ಯಾಲಿಯ ಒಪ್ಪಂದದ ಪ್ರಕಾರ ಆಲ್ಸೇಸನ್ನು ಫ್ರೆಂಚರಿಗೆ ಬಿಟ್ಟುಕೊಡಲಾಯಿತು. ಅನಂತರ ಅದು ಸು. 200 ವರ್ಷಗಳಕಾಲ ಜರ್ಮನಿಯ ಅಧೀನದಲ್ಲಿತ್ತು. 1789ರಲ್ಲಿ ಆದ ಫ್ರೆಂಚ್ ರಾಜ್ಯಕ್ರಾಂತಿ ಫ್ರಾನ್ಸಿನ ಜನರಲ್ಲಿ ಅತ್ಯಧಿಕ ಸ್ಫೂರ್ತಿಯನ್ನು ತುಂಬಿತು: ಅಲ್ಲದೆ ಜರ್ಮನರ ವಿರುದ್ದ ದ್ವೇಷಭಾವ ಬೆಳೆಯಿತು. ಆಗ ನಡೆದ ಯುದ್ಧಗಳಲ್ಲಿ ಆಲ್ಸೇಸಿನ ಲೊರೇನ್ ಫ್ರಾನ್ಸಿಗೆ ಪರಾಕ್ರಮಿ ಸೈನಿಕರನ್ನು ಒದಗಿಸಿಕೊಟ್ಟವು. 1870ರಲ್ಲಿ ಜರ್ಮನಿ ಮತ್ತು ರಷ್ಯಗಳ ನಡುವೆ ಯುದ್ಧ ನಡೆಯಿತು. ಆ ಸಂದರ್ಭದಲ್ಲಿ ಜರ್ಮನಿ ಆಲ್ಸೇಸಿನ ಎಲ್ಲ ಭಾಗಗಳನ್ನೂ ಲೊರೇನಿನ ಅರ್ಧ ಭಾಗವನ್ನೂ ವಶಪಡಿಸಿಕೊಂಡಿತು. 1918ರಲ್ಲಿ ಮತ್ತೆ ಫ್ರೆಂಚರ ಆಧಿಪತ್ಯಕ್ಕೆ ಬಂತು. ಮತ್ತೆ 1940ರಲ್ಲಿ ಈ ಪ್ರದೇಶಗಳನ್ನು ಜರ್ಮನಿ ವಶಪಡಿಸಿಕೊಂಡಿತು. 

1945ರಲ್ಲಿ ಎರಡನೆಯ ಮಹಾಯುದ್ಧ ಮುಗಿದ ಮೇಲೆ ಈ ಪ್ರದೇಶಗಳು ಫ್ರಾನ್ಸಿನ ಆಡಳಿತಕ್ಕೆ ಒಳಪಟ್ಟುವು. ಫ್ರೆಂಚರು ಮಾರ್ಸೆಲ್ ಎಂಬ ತಮ್ಮ ರಾಷ್ಟ್ರಗೀತೆಯನ್ನು ಸ್ಟ್ರಾಸ್ಬರ್ಗ್ ಮೇಯರಿನ ಮನೆಯಲ್ಲಿ ಮೊದಲಬಾರಿಗೆ ಹಾಡಿದರು. ಎರಡು ಮಹಾಯುದ್ಧಗಳ ತುಳಿತಕ್ಕೆ ಸಿಕ್ಕಿ ಈ ಪ್ರದೇಶಗಳು ಬಹುವಾಗಿ ಕಷ್ಟನಷ್ಟಗಳಿಗೆ ಒಳಗಾದವು.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ